ಸೋಮವಾರ, ಮಾರ್ಚ್ 11, 2013

ಒಲವಿಂದ ಜಾನು...

  ನೀನೊಂದು ಸುಂದರ  ಕಾಮನಬಿಲ್ಲು
  ನನ್ನ ಬಾಳಿನ ಆಗಸದಲ್ಲಿ ,
  ಮರುಭೂಮಿಯಂತಿದ್ದ  ಮನಸಿನಲಿ 
  ಮತ್ತೆ ಅರಳಿಸಿದೆ ಕಲ್ಪವಲ್ಲಿ .

  ಬಾ ನನ್ನೊಲವಿನ ಜಾನು ... 
  ಹೃದಯವನೇ ಹಾಸಿರುವೆ ,
  ನೀನೇ  ಮೊದಲು ನೀನೇ  ಕೊನೆ 
  ಒಲವಿಂದ ಕಾದಿರುವೆ .....


ಗುರುವಾರ, ನವೆಂಬರ್ 15, 2012

ನನ್ನ ಪ್ರೀತಿ !

 ನೂರು ಸುಳ್ಳುಗಳು ಸುಳಿದರೂ 
 ಅನುಮಾನ , ಅಪಮಾನ ಕಳೆದರೂ 
 ಅಪ್ಯಾಯಮಾನವಾದ ಒಂದು 
 ಸತ್ಯವಿದೆ ... ಅದು ನನ್ನ ಪ್ರೀತಿ !



           ಮುಚ್ಚಿಟ್ಟರೂ  ಮಲಗೋಲ್ಲ
           ತೆರೆದಿಟ್ಟರೂ ಹೇಳೋಲ್ಲ 
           ಹೃದಯಕ್ಕೊಂದು ಸವಿ 
           ಮಾತು ಇದೆ ... ಅದು ನನ್ನ ಪ್ರೀತಿ !


 ಬೇರೆ ಯಾವುದೇ ಮುಖ 
 ಹೊಂದುವುದಿಲ್ಲ  ಅದಕೆ 
 ಸ್ನೇಹಿತೆಗೊಂದು  ಪುಟ್ಟ 
 ಒಲವಿದೆ ... ಅದು ನನ್ನ ಪ್ರೀತಿ ! 

ಚಿತ್ರ ಕೃಪೆ :- ಗೂಗಲ್ ಇಮೇಜ್ 

ಮಂಗಳವಾರ, ನವೆಂಬರ್ 13, 2012

ಕಾವ್ಯ ಕನ್ನಿಕೆ


 ಚಂದಿರನ  ಊರಿಂದ , ಚುಕ್ಕಿಗಳ ತೇರಿಂದ 
 ಹುಣ್ಣಿಮೆಯ ಮನೆಯಿಂದ , ಜಾರಿ ಹೊರಬಂದ 
 ಕಡಲ ಅರಮನೆಯ ರಾಣಿ ನೀನೇನಾ ?







ಮುಂಗಾರಿನ ಮೊದಲ , ಆ ಕರಿಮೋಡಗಳಿಂದ 
 ಹನಿಯಾಗಿ ಧರೆಗಿಳಿದ , ಮಳೆಯ ನಡುವಿಂದ 
 ಮಿನುಗಿ ಮರೆಯಾದ , ಮಿಂಚು  ಬಳ್ಳೀನಾ ?








 ಗಿರಿಶೃಂಗಗಳ , ತುತ್ತತುದಿಯಿಂದ 
 ಪನ್ನೀರ ಕಡಲಿಂದ , ಮಿಂದೆದ್ದು ಬಂದ 
 ಕೆಂಪು ಸೂರ್ಯನ , ಪ್ರಥಮ ಕಿರಣಾನಾ ?




 
 
ಮುಂಜಾನೆ ಮಂಜಿಂದ , 
ತೋಯ್ದಾಡೋ ಗೂಡಿಂದ 
 ಮೈಮುರಿದು , ಹೊರ  ಇಣುಕಿದ  
 ಆ ಹಕ್ಕಿಗಳ ಕೊರಳಿಂದ , ಉಲಿದಾ ಕಲರವಾನಾ  ?


   ಚಿತ್ರ ಕೃಪೆ :- ಗೂಗಲ್ ಇಮೇಜ್ 


ಶನಿವಾರ, ನವೆಂಬರ್ 10, 2012

ಪ್ರೀತಿ ಎಂದರೆ......


 ಪ್ರೀತಿ ಎಂದರೆ ಹುಡುಕಾಟ 
 ಸಿಕ್ಕರೂ  ಹುಡುಕುವ ಅಲೆದಾಟ 
 ಪ್ರೀತಿ ಎಂದರೆ ನಿರೀಕ್ಷೆ 
 ಎಂದಿಗೂ ದಣಿಯದ ಆಕಾಂಕ್ಷೆ 




ಪ್ರೀತಿ ಎಂದರೆ ಬಂಧನ  
ಎರಡು ಹೃದಯಗಳ ಸ್ಪಂದನ  
ಪ್ರೀತಿ ಎಂದರೆ ಮೋಹ  
ಪರಸ್ಪರ ನಡೆವ ಸಮ್ಮೋಹ  




  ಪ್ರೀತಿ ಎಂದರೆ ಸಿಹಿಮತ್ತು 
  ಎದೆಚಿಪ್ಪೊಳಗಿನ ಮುತ್ತು 
  ಪ್ರೀತಿ ಎಂದರೆ ಅಮೂಲ್ಯ 
  ಜೀವನ ಪ್ರೀತಿಯ ಸಾಫಲ್ಯ .
 
 

          ಚಿತ್ರ ಕೃಪೆ :- ಗೂಗಲ್ ಇಮೇಜ್ 






ಗುರುವಾರ, ಅಕ್ಟೋಬರ್ 18, 2012

ಬೀಳ್ಕೊಡುಗೆ

 ಹೋಗುವವರಿಗೇನು  ಗೊತ್ತು ....
 ಏನನ್ನು ಬಿಟ್ಟು,
 ಏನನ್ನು  ಕೊಟ್ಟು ,
 ಹೋಗುತ್ತಿರುವೆಯೆಂದು ...


 ಆ  ರೈಲಿನಲ್ಲಿ  ನನ್ನ ಆಶಯ , ಕನಸು, ಸ್ನೇಹ, ಪ್ರೀತಿ , ಸಮಾಧಾನ,   ಸಂಗಾತಿ, ಮುಗುಳ್ನಗೆ, ಸಂತೋಷ, ಎಲ್ಲವೂ ಹೋಗುತ್ತಿರುವಂತೆ ಭಾಸವಾಗುತ್ತಿತ್ತು. ಅವುಗಳಿಲ್ಲದಿದ್ದರೂ, ನನ್ನ ಹೃದಯ ಭಾರವಾದಂತಿತ್ತು. ಕಣ್ಣಿನಲ್ಲಿ ಹನಿಗಳು ಕುಳಿತು ಬೀಳ್ಕೊಡಲು  ಬಂದಂತಿತ್ತು. ನಿನ್ನ ಕಣ್ಣಿನಲ್ಲಿ ಎಂದೂ ಕಾಣದ ಯಾವುದೋ ವಿಷಯ ಕಂಡಂತಿತ್ತು. ನೋವು ಕೂಡ ಕೆಲಕಾಲ  ತಂಗಿದಂತಿತ್ತು.

ಶನಿವಾರ, ಆಗಸ್ಟ್ 25, 2012

ನಿನ್ನ ಸವಿ ನೆನಪುಗಳು

ನಿನ್ನ ಸವಿ ನೆನಪುಗಳು

ಮುಂಜಾನೆಯ  ಚಿಗುರೆಲೆ ಮೇಲೆ 
ಕುಳಿತ  ಇಬ್ಬನಿ,  ಕಣ್ಣ್ ಹೊಡೆದಾಗ
ನೀನು  ನೆನಪಾಗುತ್ತೀ  ಗೆಳತಿ.

ನೆನಪಿನ  ಆಕಳಿಕೆ  ಪದೇ  ಪದೇ 
ಬಂದಾಗ, ನೆನಪಿನ  ಅಂಗಳದಲ್ಲಿ 
ನೀನು ನೆನಪಾಗುತ್ತೀ ಗೆಳತಿ.

ಹಿಂದಿನಿಂದ  ಯಾರೋ ,  ನನ್ಹೆಸರು 
ಕರೆದಾಗ,  ಆ   ಉಸಿರಲೂ 
ನೀನು  ನೆನಪಾಗುತ್ತೀ  ಗೆಳತಿ. 

ನಾವಲೆದ   ಬೀದಿಗಳು, ಕುಳಿತಂತ  
ಜಾಗಗಳಲ್ಲಿ , ಮೌನವಾಗಿ 
ಮತ್ತೆ ನೆನಪಾಗುತ್ತೀ ಗೆಳತಿ.

ಮನದ  ಪುಸ್ತಕದಲ್ಲಿ  ಅಚ್ಚೊತ್ತಿದ 
ನಿನ್ನೆಸರು , ಪ್ರತಿ  ಪುಟದಲ್ಲೂ  
ನೀನೆ  ನೆನಪಾಗುತ್ತೀ  ಗೆಳತಿ. 

ಮರೆತು ನಿನ್ನನ್ನು,  ಮುನಿಸು  ಬಂದಂತೆ 
ಮರೆತು  ಬಿಡುವೆನು ಎಂದಾಗ, ಮರೆಯಲಿ ನಿಂತು ನೆನಪಾಗುತ್ತೀ , ಗೆಳತಿ.



ಆತಂಕದ  ಪ್ರತೀ ಕ್ಷಣ , ಅರೆಗಳಿಗೆ 
ಅನುಮಾನ , ಅತಿರಿಕ್ತ  ಪದದಲ್ಲೂ 
ನೀನೆ ನೆನಪಾಗುತ್ತೀ ಗೆಳತಿ.


ಸುಮ್ಮನೇ ಇರಲಾರೆ, ಮೇಲೆದ್ದು  ಹೋಗಲಾರೆ ,
ನಿನ್ನ ನೆನಪೇ ಇರುವ ,ಈ ಜಗದಲ್ಲಿ  
ಏಕೆ ಕಾಡುತ್ತೀ ಗೆಳತಿ.

ಹರುಷವೊಂದೆ ಬಾಳಿನಲಿ,  ಬೇರೆಲ್ಲ 
ನೆನಪುಗಳೇ , ಸವಿನೆನಪುಗಳನ್ನು ನೆನಸಿಟ್ಟು ,
ಏಕೆ ಸುಮ್ಮನೆ ನೆನಪಾಗುತ್ತೀ  ಗೆಳತಿ.


ಮಂಗಳವಾರ, ಆಗಸ್ಟ್ 21, 2012

ವಲಸೆ ಹಕ್ಕಿ ಮತ್ತು ಮರ



ವಲಸೆ ಹಕ್ಕಿ ಮತ್ತು ಮರ 
ಅದೊಂದು  ವಲಸೆ  ಹಕ್ಕಿ  ಎಂದು  ತಿಳಿದರೂ ತನ್ನ ಮಡಿಲಲ್ಲಿ  ಆಶ್ರಯ ನೀಡಿತ್ತು  ಆ  ಮರ. ಸಣ್ಣ  ಸಹಾಯ ದೊಡ್ಡ  ಸ್ನೇಹವನ್ನು  ಗಳಿಸಿಕೊಡುವಂತೆ, ಅವೆರಡೂ ಸ್ನೇಹಿತರಾದವು. ದಿನನಿತ್ಯವೂ  ಮನಸ್ಸಿನಲ್ಲಿದ್ದುದನ್ನು ವಿನಿಮಯ  ಮಾಡಿಕೊಳ್ಳುತ್ತಿದ್ದವು.  ಕನಸುಗಳನ್ನೂ   ಸಹ ಹಂಚಿಕೊಳ್ಳುತ್ತಿದ್ದವು . 
ತನ್ನ  ಜೊತೆ  ಇರುವ  ಪ್ರತಿ ಕ್ಷಣ ಹಕ್ಕಿಯನ್ನು ಸಂತೋಷವಾಗಿರಿಸಬೇಕೆಂದು ಬಯಸುತ್ತಿತ್ತು  ಮರ .   ಮರದ  ಮನಸ್ಸಿಗೆ  ಸ್ವಲ್ಪವೂ  ನೋವಾಗದಂತೆ ಎಚ್ಚರ  ವಹಿಸುತ್ತಿತ್ತು  ಆ  ಹಕ್ಕಿ .  
ದಿನೇ ದಿನೇ  ಅವುಗಳಲ್ಲಿ  ವಿಶ್ವಾಸ, ನಂಬಿಕೆ  ಹೆಚ್ಚಾಯಿತು.  ಸ್ನೇಹಕ್ಕಿಂತ  ಹೆಚ್ಚಾದ  , ಪ್ರೀತಿಗಿಂತ  ಪವಿತ್ರವಾದ ಮತ್ತ್ಯಾವುದೋ  ಅನುಬಂಧ  ಅವುಗಳನ್ನು  ಬೆಸೆಯಿತು . ಜೊತೆಯವರ ಅಸೂಯೆಗೂ  ಕಾರಣವಾಯಿತು.  
ಕಳೆದ  ಕಾಲಗಳೆಷ್ಟೋ ........ ಉಳಿದ  ಮಾತುಗಳೆಷ್ಟೋ ........ ಅದೊಂದು  ದಿನ  ಬಂದೇ  ಬಿಟ್ಟಿತು. 
ಒಲ್ಲದ  ಮನಸ್ಸಿನಿಂದಲೋ .... ಅಥವಾ  ವಾಸ್ತವಕ್ಕೆ  ಕಟ್ಟು  ಬಿದ್ದೋ , ಮತ್ತೆ  ಸಂಧಿಸುವ  ನೆಪಹೇಳಿ  ಆ  ಹಕ್ಕಿ  ವಿದಾಯ ಹೇಳಿತು.  ಜೊತೆಗೆ  ಕಳೆದ  ಸವಿ  ನೆನಪುಗಳೊಂದಿಗೆ  ಆ  ಮರ  ಅಲ್ಲೇ  ಉಳಿಯಿತು .
ಬೀಳ್ಕೊಟ್ಟ  ಮನಸುಗಳ  ಕನ್ನಡಿಯಾಗಿ.